ಜತಿಸ್ವರ -
ಪಲ್ಲವಿ, ಅನುಪಲ್ಲವಿ, ಚರಣಗಳಿಂದ ಕೂಡಿ, ರಾಗದ ಪೂರ್ಣಸಂಚಾರಗಳನ್ನು ಭಾವಯುಕ್ತವಾಗಿ, ಗಮಕಯುಕ್ತವಾಗಿ ಹೊರಗೆಡಹುವ, ತಾಳಬದ್ಧವಾದ, ಸಾಹಿತ್ಯರಹಿತ ರಚನೆ. ರಚನೆಯಲ್ಲಿದು ಸ್ವರಜತಿಯನ್ನು ಹೋಲುತ್ತದೆ. ಆದರೆ ಸಾಹಿತ್ಯವಿರುವುದಿಲ್ಲ, ಅಷ್ಟೇ ವ್ಯತ್ಯಾಸ. ಜತಿಸ್ವರ ಸಂಗೀತಾಭ್ಯಾಸದಲ್ಲಿ ಒಂದು ಪ್ರಮುಖ ಹಂತ. ಗೀತೆಗಳ ಅನಂತರ ಇವನ್ನು ಅಭ್ಯಸಿಸುತ್ತಾರೆ. ರಾಗದ ವಿವಿಧ ಸಂಚಾರಗಳು, ತಾಳವೈವಿಧ್ಯ, ಧಾತುವೈವಿಧ್ಯಗಳನ್ನು ಜತಿಸ್ವರ ತಿಳಿಸಿಕೊಡುತ್ತದೆ. ರಾಗದ ವಿವಿಧ ಸಂಚಾರಗಳನ್ನು ಶಕ್ತಿಯುತವಾಗಿ ಹಿಡಿದಿಡುವುದೇ ಜತಿಸ್ವರರಚಕರ ಉದ್ದೇಶ. ತಾಳಬದ್ಧವಾಗಿರುವುದರಿಂದ ಜತಿಸ್ವರ ಕೇಳಲು ಹಿತವಾಗಿರುತ್ತದೆ. ಚರಣಗಳು ಬೇರೆ ಬೇರೆ ಧಾತುಗಳಲ್ಲಿ ರಚಿತವಾಗಿರುತ್ತವೆ. ಉದಾ : ಸಾರಿಗಾಪಾದಾಸಾನೀದಾ (ಬಿಲಹರಿ).

ಮೃದಂಗನಾದದ, ಲಯದ, ಅನುಕರಣಶಬ್ದಗಳು ಜತಿಗಳು. ಸ್ವರಗಳೊಂದಿಗೆ ಜತಿಗಳನ್ನೂ ಸೇರಿಸಿ ಹಾಡುವುದರಿಂದ ಜತಿಸ್ವರದ ರಚನೆಯಲ್ಲಿ ವೈವಿಧ್ಯವನ್ನು ಸಾಧಿಸಿದ್ದಾರೆ. ಉದಾಹರಣೆಗೆ, ಸ್ವರಪಲ್ಲವಿ, ಶಬ್ದಪಲ್ಲವಿ, ರಾಗಮಾಲಿಕೆಯ ಜತಿಸ್ವರ.

ಮುಕ್ತಾಯಿಸ್ವರಗಳು ಅರ್ಧ ಆವರ್ತಸ್ವರ ಮತ್ತು ಉಳಿದರ್ಧ ಆವರ್ತ ಜತಿಗಳಿಂದ ಕೂಡಿದ್ದರೆ ಅವನ್ನು ಸ್ವರಪಲ್ಲವಿಗಳೆಂದು ಕರೆಯುತ್ತಾರೆ. ಪೊನ್ನಯ್ಯ ವಡಿವೇಲು ಮತ್ತು ಶಿವಾನಂದಂ-ಇವರು ರಚಿಸಿರುವ ಜತಿಸ್ವರಗಳು ಒಳ್ಳೆಯ ಉದಾಹರಣೆಗಳು.

ಪಲ್ಲವಿ, ಅನುಪಲ್ಲವಿಗಳು ಜತಿಗಳಿಂದಲೂ ಚರಣ ಜತಿಸ್ವರಗಳಿಂದಲೂ ಕೂಡಿರುವ ಜತಿಸ್ವರಗಳನ್ನು ಶಬ್ದಪಲ್ಲವಿಗಳೆಂದು ಕರೆಯುತ್ತಾರೆ. ಉದಾ : ತಾರಿಜೆಂತಕ (ಅಠಾಣ ರಾಗ-ಆದಿತಾಳ). ಅಂತೆಯೇ ಸ್ವಾತಿತಿರುನಾಳರ ಹಲವು ಜತಿಸ್ವರಗಳು ರಾಗಮಾಲಿಕೆಯಲ್ಲಿವೆ.

ಜತಿಸ್ವರಗಳು ಚೌಕಕಾಲ ಅಥವಾ ಮಧ್ಯಮಕಾಲದಲ್ಲಿ ರಚಿತವಾಗಿರುತ್ತವೆ. ಸ್ವರಜತಿಗಳು ಜತಿಗಳಿಂದ ಕೂಡಿ ಜತಿಸ್ವರಗಳೆಂಬ ನೃತ್ಯರಚನೆಗಳಾಗಿ ರೂಪುಗೊಂಡುವು. (ಬರು ಬರುತ್ತ ಜತಿಗಳ ಸೇರ್ಪಡೆ ನಿಂತುಹೋಯಿತು.) ಭರತನಾಟ್ಯ ನಿರೂಪಣೆಯಲ್ಲಿ ಜತಿಸ್ವರಗಳು ಪ್ರಮುಖಪಾತ್ರವಹಿಸಿವೆ. ಜತಿಸ್ವರದ ಸ್ವರವಿನ್ಯಾಸಗಳಿಗೆ ಅಲ್ಲಿ ತಕ್ಕ ಚಾಕ್ಷುಪ ಅಭಿನಯವನ್ನು ನೀಡಿ, ಸ್ವರಶ್ರೇಣಿಗಳನ್ನು ವಾದ್ಯಗಳ ಪೋಷಣೆಯೊಂದಿಗೆ ಹಾಡಲಾಗುತ್ತದೆ.                 (ಟಿ.ಎನ್.ಎನ್.ಆರ್.; ವಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ